ಕಾಬಟ್, ಜಾನ್ (ಜಿಯೊವನ್ನೆ ಕಾಬಾಟೊ)

 1450-1499. ಇಟಲಿಯ ನಾವಿಕ ಮತ್ತು ಭೂ ಪರಿಶೋಧಕ. ಜಿನೋವದಲ್ಲಿ ಹುಟ್ಟಿ 1461ರಲ್ಲಿ ವೆನಿಸಿಗೆ ವಲಸೆ ಹೋದ. ಈತನಿಗೆ ಇಟಲಿಯ ಪೌರಹಕ್ಕುಗಳು ಲಭ್ಯವಾದ್ದು 1476ರಲ್ಲಿ. ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ ಈತ ನೌಕಾವ್ಯಾಪಾರದಲ್ಲಿ ನಿರತನಾಗಿದ್ದ. 1484ರಲ್ಲಿ ಇಂಗ್ಲೆಂಡಿಗೆ ತೆರಳಿ, ಬ್ರಿಸ್ಟಲಿನ ವರ್ತಕಪಂಗಡದ ಆಶ್ರಯಪಡೆದ. ಯೂರೋಪಿನ ಪಶ್ಚಿಮಕ್ಕಿದ್ದ ರಾಷ್ಟ್ರಗಳೊಂದಿಗೆ ಒಂದು ನೌಕಾವ್ಯಾಪಾರ ಮಾರ್ಗವನ್ನು ಶೋಧನೆ ಮಾಡಬೇಕೆಂಬುದು ಇವನ ಗುರಿಯಾಗಿದ್ದಂತೆ ತೋರುತ್ತವೆ. ಇದಕ್ಕೆ ಇಂಗ್ಲಿಷರ ಸಹಾಯ ಯಾಚಿಸಿ ಇಂಗ್ಲೆಂಡಿಗೆ ಹೋದ. ಬ್ರಿಸ್ಟಲಿನ ವರ್ತಕಪಂಗಡದ ಸಹಾಯದಿಂದ ಚಕ್ರವರ್ತಿ 7ನೆಯ ಹೆನ್ರಿಯಿಂದ ನೌಕಾಯಾನದ ಸನ್ನದನ್ನು 1496ರಲ್ಲಿ ಪಡೆದು 1497ರ ಮೇ 2ರಂದು ಬ್ರಿಸ್ಟಲಿನಿಂದ ಹೊರಟ ಈತ ಬ್ರಿಟನ್ ದ್ವೀಪದ ಭೂಶಿರವನ್ನು ತಲುಪಿದ್ದು ಜೂನ್ 24ರಂದು. ಅದನ್ನು ಏಷ್ಯಖಂಡದ ಈಶಾನ್ಯಭಾಗವೆಂದು ತಪ್ಪು ತಿಳಿದು ಸೆಂಟ್ ಲಾರೆನ್ಸ್ ಕೊಲ್ಲಿಯ ತೀರಪ್ರದೇಶದಲ್ಲಿ ಸಂಚರಿಸಿ ಅನಂತರ ಇಂಗ್ಲೆಂಡಿಗೆ ಮರಳಿದ. ಇದರಿಂದ ಸಂಪ್ರೀತನಾದ ಚಕ್ರವರ್ತಿಯಿಂದ ಇವನಿಗೆ 10 ಪೌಂ. ಬಹುಮಾನವೂ 20 ಪೌಂ. ವಾರ್ಷಿಕವೇತನವೂ ದೊರಕಿದುವು. ಲಂಡನ್ ಮತ್ತು ಬ್ರಿಸ್ಟಲಿನ ವರ್ತಕರ ನೆರೆವಿನಿಂದ (1498) ಈತ ಮತ್ತೊಂದು ನೌಕಾಯಾನಕ್ಕೆ ಸನ್ನದನ್ನು ಪಡೆದ. ಇವನ ನೌಕಾತಂಡ ಬಿರುಗಾಳಿಗೀಡಾಗಿ ಐರ್ಲೆಂಡ್ ದಡವನ್ನು ಮುಟ್ಟಿತು. ಅನಂತರ ನೌಕಾಯಾನ ಮುಂದುವರಿಸಿದರೂ ಆ ವಿಷಯವಾಗಿ ಹೆಚ್ಚಿನ ಮಾಹಿತಿಗಳು ದೊರಕಿಲ್ಲ. ಒಟ್ಟಿನಲ್ಲಿ ಪೌರಸ್ತ್ಯ ದೇಶಗಳೊಡನೆ ವ್ಯಾಪಾರಸಂಪರ್ಕಕ್ಕಾಗಿ ಹತ್ತಿರದ ಮಾರ್ಗವನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ಸಫಲನಾಗದೆ ಬರಿಗೈಯಿಂದ ಇಂಗ್ಲೆಂಡಿಗೆ ಹಿಂತಿರುಗಿದ. 1499ರಲ್ಲಿ ಬ್ರಿಟನಿನಿಂದ ವರ್ಷಾಶನ ಪಡೆದದ್ದಕ್ಕೆ ದಾಖಲೆಯುಂಟು, ಆಮೇಲೆ ಇವನ ಬಗ್ಗೆ ಇತಿಹಾಸದಲ್ಲಿ ಯಾವ ಮಾಹಿತಿಯೂ ದೊರಕುವುದಿಲ್ಲ.

 
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

(ಎ.ಕೆ.ಎಸ್.ಎಚ್.ಎ.)